Saturday, June 20, 2015

Press Note - Byndoor Murder Case




ದಿನಾಂಕ: 17-06-2015 ರಂದು ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಧ್ಯಾರ್ಥಿನಿ ಕುಮಾರಿ ಅಕ್ಷತಾ (17 ವರ್ಷ) ಈಕೆಯು ಎಂದಿನಂತೆ ಬೆಳಿಗ್ಗೆ 8:30 ಘಂಟೆಗೆ ಕುಂದಾಪುರ ತಾಲೂಕು ಪಡುವರಿ ಗ್ರಾಮದ ಹೇನ್‌ಬೇರು ಎಂಬಲ್ಲಿರುವ ತನ್ನ ಮನೆಯಿಂದ ಬೈಂದೂರು ಪದವಿ ಪೂರ್ವ ಕಾಲೇಜಿಗೆ ಹೋದವಳು ಸಂಜೆ ಮನೆಗೆ ಬಾರದೇ ಇದ್ದುದರಿಂದ ಆತಂಕಗೊಂಡ ಆಕೆಯ ಮನೆಯವರು ಹಾಗೂ ಊರವರು ಹೇನ್‌ಬೇರು ಹಾಡಿ ಪ್ರದೇಶದಲ್ಲಿ ಆಕೆಯನ್ನು ಹುಡುಕಾಡುತ್ತಿರುವಾಗ ಸಂಜೆ 6:15 ಘಂಟೆಗೆ ಹೇನ್‌ ಬೇರು ಕಾಸನಮರದ ಜಡ್ಡು ಎಂಬಲ್ಲಿ ಅರಣ್ಯ ಇಲಾಖೆಯ ಅಕೇಶಿಯಾ ನೆಡುತೋಪಿನ ಹಾಡಿಯಲ್ಲಿ ಕುಮಾರಿ ಅಕ್ಷತಾಳ ಮೃತದೇಹ ಕಂಡು ಬಂದಿದ್ದು, ಬಳಿಯಲ್ಲಿ ಆಕೆಯ ಶಾಲಾ ಬ್ಯಾಗ್‌, ಕೊಡೆ, ಹಾಗೂ ನೀರಿನ ಬಾಟಲಿ ಕಂಡು ಬಂದಿದ್ದು, ಆಕೆಯನ್ನು ದಿನಾಂಕ 17-06-2015 ರಂದು ಸಂಜೆ 4:20 ಘಂಟೆಯಿಂದ 6:15 ಘಂಟೆಯ ಮಧ್ಯಾವಧಿಯಲ್ಲಿ ಆಕೆಯನ್ನು ಯಾವುದೋ ಕಾರಣಕ್ಕೆ ಯಾರೋ ದುಷ್ಕರ್ಮಿಗಳು ಆಕೆ ಧರಿಸಿದ್ದ ಚೂಡಿದಾರದ ವೇಲ್‌ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಆಕೆಯ ತಾಯಿ ಶ್ರೀಮತಿ ರಾಧ ದೇವಾಡಿಗ ಇವರು ಬೈಂದೂರು ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಬೈಂದೂರು ಠಾಣಾ ಅ.ಕ್ರ. 172/2015 ಕಲಂ 302, 201 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಮಾನ್ಯ ಪಶ್ಚಿಮ ವಲಯದ ಪೊಲೀಸ್‌ ಮಹಾನಿರೀಕ್ಷಕರವರ ಸೂಕ್ತ ಮಾರ್ಗದರ್ಶನದಂತೆ ಪೊಲೀಸ್‌ ಅಧೀಕ್ಷಕರು ಉಡುಪಿ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಅಧಿಕಾರಿ/ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದು, ತಂಡದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ, ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಹಾಗೂ ಪೊಲೀಸ್‌ ವೃತ್ತ ನಿರೀಕ್ಷಕರು, ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾಪು ಮತ್ತು ಪೊಲೀಸ್‌ ನಿರೀಕ್ಷಕರು, ಜಿಲ್ಲಾ ಅಪರಾಧ ಪತ್ತೆ ವಿಭಾಗ ಇವರುಗಳು ಅಧೀನ ಅಧಿಕಾರಿ ಸಿಬ್ಬಂದಯವರೊಂದಿಗೆ ಆರೋಪಿ ಪತ್ತೆ ಬಗ್ಗೆ ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಮಾಹಿತಿ ಸಂಗ್ರಹಿಸಿ ಪ್ರಕರಣದ ಆಪಾದಿತ ಸುನಿಲ್‌ @ ಕೆಪ್ಪೆ, ಪ್ರಾಯ 19 ವರ್ಷ, ತಂದೆ ದಿ. ಶೀನ, ವಾಸ: 10ನೇ ಕ್ರಾಸ್‌, ಯೋಜನಾ ನಗರ, ಯಡ್ತರೆ ಗ್ರಾಮ, ಕುಂದಾಪುರ ತಾಲೂಕು ಈತನನ್ನು ದಿನಾಂಕ 19/06/2015 ರಂದು ತಡರಾತ್ರಿಯಲ್ಲಿ ಬೈಂದೂರು ಯೋಜನಾ ನಗರದ ಬಳಿ ದಸ್ತಗಿರಿ ಮಾಡಲಾಗಿದೆ.   
ಕುಮಾರಿ ಅಕ್ಷತಾಳು ಕಾಲೇಜು ಮುಗಿಸಿ ಮನೆಗೆ ಒಬ್ಬಳೇ ಹಿಂದಿರುಗುವ ಸಮಯ ಆರೋಪಿಯು ಆಕೆಯನ್ನು ಹಿಂಬಾಲಿಸಿ, ಅವಳದೇ ಚೂಡೀದಾರದ ವೇಲ್‌ನಿಂದ ಕತ್ತು ಹಿಸುಕಿ ಕೊಲೆಮಾಡಿದ್ದು, ನಂತರ ಆಕೆಯ ಮೇಲೆ ಲೈಗಿಂಕ ದೌರ್ಜನ್ಯ ನಡೆಸಲು ಯತ್ನಿಸಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿರುತ್ತದೆ. ಘಟನೆ ನಡೆದ ಕೇವಲ ಎರಡು ದಿನದೊಳಗೆ ಪ್ರಕರಣದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಭೇದಿಸಿದ್ದು, ಗ್ರಾಮೀಣ ಭಾಗದಲ್ಲಿ ನಡೆದ ಕಗ್ಗಂಟಾಗಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್‌ ಅಧೀಕ್ಷಕರವರ ನೇತೃತ್ವದ ವಿಶೇಷ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಈ ಕುರಿತಂತೆ ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ, ಡಿಜಿ & ಐಜಿಪಿ, ಕರ್ನಾಟಕ ರಾಜ್ಯ, ಎಡಿಜಿಪಿ, ಕಾನೂನು & ಸುವ್ಯವಸ್ಥೆ ಹಾಗೂ ಎಡಿಜಿಪಿ, ಅಪರಾಧ ಹಾಗೂ ತಾಂತ್ರಕ ಸೇವೆಗಳು ಇವರು ಮೃತರ ಕುಟುಂಬಕ್ಕೆ ಸಾಂತ್ವಾನವನ್ನು ವ್ಯಕ್ತಪಡಿಸಿ, ಪ್ರಕರಣವನ್ನು ಬೇಧಿಸಿದ ಸಮಗ್ರ ಉಡುಪಿ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಪ್ರಶಂಸನೆಯನ್ನು ವ್ಯಕ್ತಪಡಿಸಿರುವುದಲ್ಲದೇ, ಮಾನ್ಯ ಡಿಜಿ & ಐಜಿಪಿ, ಕರ್ನಾಟಕ ರಾಜ್ಯರವರು ರೂ. 3 ಲಕ್ಷ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಮಾನ್ಯ ಪೊಲೀಸ್‌ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರುರವರು ತಿಳಿಸಿರುತ್ತಾರೆ.

1 comment:

Unknown said...

sir we are proud to have SP like you..!!Your proactive actions indeed helps in reducing crime rates in the district